ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್
ಗಂಧ, ಪುಷ್ಪ,ಫಲ, ಕೆತ್ತೆಗಳ ಕಷಾಯ ಇತ್ಯಾದಿ ಸಸ್ಯಜನ್ಯ ವಸ್ತುಗಳು. ಹಾಲು.ಮೊಸರು, ತುಪ್ಪ,ಗೋರೋಚನ ಇತ್ಯಾದಿ ಪ್ರಾಣಿಜನ್ಯ ವಸ್ತುಗಳು. ಚಿನ್ನ, ಬೆಳ್ಳಿ, ಪಾದರಸ ಇತ್ಯಾದಿ ಭೂಮಿಜನ್ಯವಸ್ತುಗಳು. , ಮುತ್ತು.ಹವಳ,ಶಂಖ, ಇತ್ಯಾದಿ ಸಾಗರಜನ್ಯ ವಸ್ತುಗಳು.ವಜ್ರ, ಮಾಣಿಕ್ಯ, ಧಾತುಗಳು ಇತ್ಯಾದಿ ಪರ್ವತಜನ್ಯ ವಸ್ತುಗಳಿಂದ ಕೂಡಿದ ಪಂಚಭೂತಾತ್ಮಕವಾದ ದ್ರವ್ಯ ಗಳನ್ನು ತುಂಬಿಸಿ. ರಾತ್ರಿಯಲ್ಲಿ ಅಧಿವಾಸ ಮಾಡಿದ ಕಲಶಗಳನ್ನು ಅಭಿಷೇಕ ಮಾಡಲು ಆಚಾರ್ಯರು ಪ್ರಾತ಼ಃ ಕಾಲದಲ್ಲಿ ಸ್ನಾನ ಸಂಧ್ಯಾವಂದನೆಯನ್ನು ಪೂರೈಸಿ ,ತಮ್ಮ ಹಿರಿಯರನ್ನು ತರ್ಪಣಾದಿಗಳಿಂದ ಸಂಪ್ರೀತಿ ಗೊಳಿಸಿ. ಗರ್ಭಗುಡಿಯ ಎದುರಲ್ಲಿ ನಿಂತು ಸ್ವಸ್ತಿವಾಚನಗಳನ್ನು ಪಠಿಸಿ ದ್ವಾರ ದೇವತೆಗಳಿಗೆ ನಮಸ್ಕರಿಸಿ ಬಾಗಿಲು ತೆರೆದು ಒಳಗೆ ಪ್ರವೇಶಿಸಿ,ದೇವರಿಗೆ ವಂದಿಸಿ, ನಿರ್ಮಾಲ್ಯವನ್ನು ತೆಗೆದು ಬಿಂಬ ಪೀಠಾದಿಗಳನ್ನು ಚೆನ್ನಾಗಿ ತೊಳೆದು, ನಮ್ಮಂತೆಯೇ ದೇವರಿಗೆ ಉತ್ತರಣೆ ಕಡ್ಡಿಗಳಿಂದ ಹಲ್ಲುಜ್ಜುವ ಕ್ರಮವನ್ನು ಮಾಡಿ ಎಳ್ಳೆಣ್ಣೆಯನ್ನು ಹಚ್ಚಿ ಬಿಸಿನೀರಿನಿಂದ ಅಭ್ಯಂಗ ಸ್ನಾನವನ್ನು ಮಾಡಿಸುವುದು.ಉಪಚಾರಾದಿಗಳನ್ನು ಕೊಟ್ಟು ಪಾಯಸವನ್ನು ನಿವೇದಿಸಿ ಮಂಗಳಾರತಿ ಮಾಡುವುದು.
ಆಮೇಲೆ ಕಲಶ ಮಂಟಪಕ್ಕೆ ಬಂದು ಕಲಶಗಳಿಗೆ ಪೂಜೆ ಮಾಡುವುದು.ಆಯಾದೇವರ ಅಭಿಷೇಕ ಕ್ರಮದಂತೆ ಪರಿಕಲಶಗಳನ್ನು ಅಭಿಷೇಕ ಮಾಡಿ ಖಂಡದ ದ್ರವ್ಯ ಕಲಶವನ್ನು ಅಭಿಷೇಕ ಮಾಡಿ ನೈವೇದ್ಯ ಸಮರ್ಪಣೆ ಮಾಡಿ ಪೂಜೆ ಮಾಡುವುದು.ಆಮೇಲೆ ಅಂತರಾಸ್ನಾನ ಎಂಬ ಶುದ್ಧ ಜಲವನ್ನು ಅಭಿಷೇಕ ಮಾಡುವುದು. ಹೀಗೆ ಪ್ರತೀ 85 ಖಂಡಗಳ ಕಲಶಾಭಿಷೇಕ ಕಾಲದಲ್ಲೂ 85 ಬಾರಿ ಪ್ರತ್ಯೇಕವಾಗಿ ಅನ್ನ ನೈವೇದ್ಯ ಮಾಡಿ ಪೂಜಿಸುವುದು.ಆಮೇಲೆ ಪುನಃ ಕಲಶ ಮಂಟಪಕ್ಕೆ ಬಂದು ಬ್ರಹ್ಮಕಲಶಕ್ಕೆ ಪೂಜೆ ಯನ್ನು ಮಾಡಿ, ಮಂಟಪದಲ್ಲಿರುವ ಧ್ವಜ, ತೋರಣ, ದ್ವಾರದೇವತೆಗಳನ್ನು, ಸುತ್ತಲೂ ಕುಂಡಗಳಲ್ಲಿರುವ ಅಗ್ನಿ ಚೈತನ್ಯವನ್ನೂ , ಪೀಠದಲ್ಲಿರುವ ಪೀಠಶಕ್ತಿಯನ್ನೂ ಬ್ರಹ್ಮಕಲಶಕ್ಕೆ ಉದ್ವಾಸಿಸಿ ಕಲಶವನ್ನು ಶಿಷ್ಯನ ಕೈಯಲ್ಲಿ ಎತ್ತಿಕೊಡುವುದು.
ಬ್ರಹ್ಮಕಲಶ ಕೊಂಡುಹೋಗುವ ಕ್ರಮ.
ಸ್ಯಾನ್ನೀರಾಜನಮಗ್ರತಃ ಕರಕಧಾರಾರ್ಘ್ಯಂವಹನ್ದೇಶಿಕಃ
ಬಿಂಬಸ್ವಾಪಘಟೌ ಘಟೇಶ ಯಜಮಾನೇತಿ ಯಾನೇಕ್ರಮಃ..
ಎಂಬ ಶಾಸ್ತ್ರ ನಿಯಮದಂತೆ ಎದುರಿನಲ್ಲಿ ಮಂಗಳವಾದ್ಯ ದೊಂದಿಗೆ ಮಂಗಳದರ್ಶನಕ್ಕಿರುವ ಅಷ್ಟಮಂಗಲ ಚಿಹ್ನೆಗಳು ,ಅಂಕುರ ಪಾಲಿಕೆಗಳು, ನೀರಾಂಜನದೀಪ, ಕರ್ಕರೀಕಲಶದ ಧಾರೆ, ಆಚಾರ್ಯರು ಶಂಖದಲ್ಲಿ ಅರ್ಘ್ಯವನ್ನು ಹಿಡಿದುಕೊಂಡು , ಹಿಂದಿನಿಂದ ಬ್ರಹ್ಮಕಲಶ , ಅದರ ಹಿಂದೆ ಕುಂಭೇಶಕಲಶ , ಹಿಂದಿನಿಂದ ಯಜಮಾನ, ಭಕ್ತರು.ಹೀಗೆ ಸಾಲಾಗಿ ಮೆರವಣಿಗೆಯಲ್ಲಿ ಸಾಗಬೇಕು(.ಕೈಯಲ್ಲಿ ದೇವರಿಗೆ ಅರ್ಪಿಸುವ ಮಂಗಳವಸ್ತುಗಳಿಲ್ಲದೆ ಉತ್ಸವದಲ್ಲಿ ದೇವರ ಮುಂದಿನಿಂದ ಹೋಗುವುದು ಶಾಸ್ತ್ರ ನಿಷಿದ್ಧ.)
ಈ ರೀತಿಯಾಗಿ ಯಾನಕ್ರಮದಲ್ಲಿ ಗರ್ಭಗುಡಿಗೆ ಸಾಗಿ ದ್ವಾರ ದೇವತೆಗಳಿಗೆ ವಂದಿಸಿ ಪೀಠದ ಸುತ್ತಲೂ ಕರ್ಕರೀಕಲಶದ ಧಾರೆಯನ್ನು ಸುರಿದು ,ಕುಂಭೇಶ ಕಲಶದ ಅಭಿಷೇಕ ಮಾಡಿ, ಬ್ರಹ್ಮ ಕಲಶವನ್ನು ಅಭಿಷೇಕ ಮಾಡುವುದು.
Leave a Reply