ಬ್ರಹ್ಮಕಲಶ ಪ್ರಬೋಧಿನೀ: ಕಲಶಾಭಿಷೇಕದ ನಂತರದ ಕ್ರಿಯೆಗಳು.

ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್

ದ್ರವ್ಯ ಸಹಿತವಾದ ಬ್ರಹ್ಮಕಲಶಾಭಿಷೇಕವಾದ ಮೇಲೆ ತಂತ್ರೋಕ್ತ ವಿಧಿಯಂತೆ ಎಲ್ಲಾ ಕಲಾತತ್ವಗಳನ್ನು ಬಿಂಬದಲ್ಲಿ ನ್ಯಾಸ ಮಾಡಿ ,ಬಿಂಬದಲ್ಲಿ ಶಿವನು ಸಕಲಕಲಾಪೂರ್ಣತೆಯನ್ನು ಹೊಂದಿದ್ದಾನೆ ಎಂದು ಭಾವಿಸಿ, ಉಪಚಾರಗಳನ್ನು ಸಮರ್ಪಿಸಿ, ವಿಶೇಷ ನೈವೇದ್ಯವನ್ನು ಮಾಡಿ ಹೊರಗೆ ಬಂದು ಅಗ್ನಿಯಲ್ಲಿ ಅಗ್ನಿರೂಪನಾದ ಪರಶಿವನಿಗೆ ಅನ್ನದಿಂದ  ಆಹುತಿಗಳನ್ನು ಕೊಟ್ಟು, ವಾಹನವನ್ನು ಪೂಜಿಸಿ, ಒಳಗೆ ಹೋಗಿ ನೈವೇದ್ಯವನ್ನು ವಿಸರ್ಜಿಸಿ, ಮಹಾಪೂಜೆಯನ್ನು ಮಾಡುವುದು. ಆಮೇಲೆ ಕಲಶದ ಶೇಷ ತೀರ್ಥವನ್ನು ಎಲ್ಲಾ ಬಲಿಶಿಲೆಗಳಿಗೆ ಹಾಕಿ ಬಲಿಪರಿವಾರ ದೇವತೆಗಳಿಗೆ ಬಲಿಯನ್ನು ಸಮರ್ಪಿಸಿ, ಎಲ್ಲರೂ ದೇವರ ಎದುರಿನಲ್ಲಿ ನಿಂತು ಶುದ್ಧಮನಸ್ಕರಾಗಿ ಪ್ರಾರ್ಥಿಸುವುದು.ಹೇ ಪರಶಿವನೇ ಲೋಕಾನುಗ್ರಹದ ಹೇತುವಾಗಿ ನಮಗೆ ಸುಖವನ್ನು ಕೊಡುವುದಕ್ಕೋಸ್ಕರ ಬಿಂಬದಲ್ಲಿ ಸ್ಥಿರವಾಗಿರು, ನಿನ್ನ ಸಾನಿಧ್ಯವನ್ನು ಪ್ರತೀದಿನ ನೀನೇ ವೃಧ್ಧಿಸಿಕೊಳ್ಳು, ಊರಿನ ಪ್ರಜೆಗಳಲ್ಲಿ ಪರಸ್ಪರ ವಿರೋಧ  ಬಾರದಿರಲಿ, ಯಜಮಾನನಿಗೆ ಸಮೃದ್ಧಿಯಾಗಲಿ, ರಾಜನಿಗೂ ರಾಷ್ಟ್ರಕ್ಕೂ  ಉಪದ್ರವ ಬಾರದಿರಲಿ, ಕ್ಷೇಮದಿಂದಲೂ, ಅತುಲವಾದ ಸಂಪತ್ತಿನ ವೃದ್ಧಿಯಿಂದಲೂ ನಮ್ಮನ್ನು ಉದ್ಧಾರ ಮಾಡು, ಲೋಕಕ್ಕೆ ಶಾಂತಿಯಾಗಲಿ, ಪುಷ್ಟಿಯಾಗಲಿ, ಮಂಗಳವಾಗಲಿ ಯಾವುದೂ ಕೊರತೆಯಾಗದಿರಲಿ, ಎಲ್ಲರೂ ಸಂಪತ್ತು ಉಳ್ಳವರಾಗಲಿ, ಆಕಾಶದಲ್ಲಿ ಯಾವತ್ತಿನ ತನಕ ಸೂರ್ಯ ಚಂದ್ರರಿರುತ್ತಾರೋ, ಎಲ್ಲಿಯವರೆಗೆ ಈ ಭೂಮಿ ಇರುತ್ತದೋ ಅಲ್ಲಿಯವರೆಗೆ ಸರ್ವಮಂತ್ರಾದಿಗಳ ಸಂಯುಕ್ತನಾಗಿ ಲೋಕಾನುಗ್ರಹ ಕಾಮನೆಗಾಗಿ ಈ ಲಿಂಗದಲ್ಲಿ ಸಾನಿಧ್ಯವನ್ನು ಹೊಂದಿರು ಎಂದು ಭಕ್ತಿಯಿಂದ ಪ್ರಾರ್ಥಿಸುವುದು.(ಇವಿಷ್ಟು ಅಷ್ಟಬಂಧ ಬ್ರಹ್ಮಕಲಶದ ಅಂತರ್ಮುಖ ಸಮಾರಾಧನೆಯ ಸಾರಾಂಶದ  ಮಾಹಿತಿಯನ್ನು ಆಸ್ತಿಕ ಭಗವಧ್ಭಕ್ತರಿಗಾಗಿ ನೀಡಿರುವುದು.ಇಲ್ಲಿ ನಡೆಯುವ ಪ್ರತಿಯೊಂದು ಕ್ರಿಯಾ ಕಲಾಪಗಳು ಲೋಕದ ಹಿತದೃಷ್ಟಿಯೇ ಹೊರತು ಯಾವುದೇ ವೈಯಕ್ತಿಕ ವಿಷಯವಲ್ಲ ಎಂದು ಇದರಿಂದ ಸ್ಪಷ್ಟವಾಗುವುದು.)

Leave a Reply

Blog at WordPress.com.

Up ↑