2013ರಲ್ಲಿ ಕರ್ನಾಟಕದಲ್ಲಿ ರಾಜ್ಯ ಚುನಾವಣೆ ನಡೆದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ಸ್ ಸರಕಾರ ಅಧಿಕಾರಕ್ಕೆ ಬಂದಿತು. ಚುಕ್ಕಾಣಿ ಹಿಡಿದ ಕೆಲವೇ ದಿನಗಳಲ್ಲಿ ವಿವಿಧ ‘ಭಾಗ್ಯ’ ಯೋಜನೆಗಳನ್ನು ಘೋಷಿಸಲಿಕ್ಕೆ ಪ್ರಾರಂಭಿಸಿತು. ಅನ್ನ ಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ ಎಂಬ ಹೆಸರಿನಲ್ಲಿ ತಾನೊಂದು ಸೋಷಿಯಲಿಸ್ಟ್ ಸರಕಾರ ಎಂದು ಸಾಬೀತುಪಡಿಸುವ ದಿಟ್ಟಿನಲ್ಲಿ ಹೆಜ್ಜೆ ಹಾಕಿತು.
ಈ ಸರಕಾರದ ಐದು ವರುಷಗಳ ಅವಧಿ ಇನ್ನೇನು ಮುಗಿಯಲಿದೆ, ಮುಂದಿನ ತಿಂಗಳ 12ರಂದು ಹೊಸ ಚುನಾವಣೆ. ಈ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಸರಕಾರದಿಂದ ನಮಗೆಲ್ಲ ನಿಜವಾಗಿ ದೊರೆತ ಭಾಗ್ಯ ಗಳೇನು? ಬನ್ನಿ ಮೆಲುಕು ಹಾಕೋಣ
ವಿಭಜನಾ ಭಾಗ್ಯ
ನಾವು ಜಾತ್ಯಾತೀತರು ಜಾತ್ಯಾತೀತರು ಎಂದು ಊರೆಲ್ಲಾ ಹೇಳಿಕೊಂಡು ಬಂದ ಈ ಸರಕಾರ ಕರ್ನಾಟಕದ ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ತಂದಿಟ್ಟ ಅತಿ ದೊಡ್ಡ ದುರ್ಭಾಗ್ಯ ಎಂದರೆ ಲಿಂಗಾಯತರು ಪ್ರತ್ಯೇಕ ಧರ್ಮ ಎಂಬ ನಿರ್ಧಾರ. ನೂರಾರು ವರ್ಷಗಳಿಂದ ಹಿಂದೂ ಸಮಾಜದ ಇನ್ನಿತರ ವರ್ಗದವರೊಡನೆ ಅನ್ಯೋನ್ಯವಾಗಿ ಬದುಕಿಕೊಂಡು ಬಂದಿರುವ ಲಿಂಗಾಯತ ಬಂಧುಗಳನ್ನು ನೀವು ಹಿಂದುಗಳಲ್ಲ ನಿಮಗೆ ಬೇರೆಯೇ ಧರ್ಮ ಎಂಬ ಕಿರೀಟ ಕೊಡುತ್ತೇವೆ, ಅದರೊಂದಿಗೆ ಬಹು ಸವಲತ್ತುಗಳನ್ನು ಕೂಡ ನೀಡುತ್ತೇವೆ ಎಂದೆಲ್ಲಾ ಆಶ್ವಾಸನೆ ನೀಡಿ ಚುನಾವಣೆಗೆ ಕೆಲವೇ ತಿಂಗಳುಗಳು ಇವೆ ಎನ್ನುವ ಹೊತ್ತಿಗೆ ಕೇಂದ್ರ ಸರಕಾರಕ್ಕೆ ಈ ರೀತಿಯ recommendation ನೀಡಿ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ ಗರಿಮೆ ಈ ಮಾನ್ಯ ಸರಕಾರದ್ದು!
ಆತ್ಮಹತ್ಯೆ ಭಾಗ್ಯ
ನಮ್ಮದು ರೈತ ಪರ ಸರಕಾರ, ರೈತರ ಕಷ್ಟಕ್ಕೆ ಸ್ಪಂದಿಸುವ ಸರಕಾರ ಎಂದು ಹೇಳಿದ್ದೇ ಬಂತು. 5 ವರುಷದ ನಂತರ ಹಿಂದಿರುಗಿ ನೋಡಿದರೆ ಕಾಣುವುದು ೩೫೧೫ ರೈತರ ಆತ್ಮಹತ್ಯೆ! ಬರಗಾಲದ ಪೀಡೆಯನ್ನು ತಾಳಲಾರದೆ, ಸರಕಾರದಿಂದ ಏನೂ ಸಹಾಯ ಸಿಗದೆ ಸಾಲಗಾರರಿಂದ ತಪ್ಪಿಸಿಕೊಳ್ಳಲು ಬೇರೆ ವಿಧಿಯೇ ಇಲ್ಲ ಎಂದು ತಿಳಿದು ಸಾವಿರಾರು ಅನ್ನ ದಾತರು ತಮ್ಮ ಪ್ರಾಣಗಳನ್ನು ತಾವೇ ತೆಗೆದುಕೊಂಡರು. ಆ ಭಾಗ್ಯ ಈ ಭಾಗ್ಯ ಎಂದುಕೊಂಡು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ ಈ ಸರಕಾರ ರೈತರ ಶವ ಅವರ ಮಕ್ಕಳ ಬೆನ್ನು ಹತ್ತುವ ಪರಿಸ್ಥಿತಿ ಬರದ ಹಾಗೆ ಏನನ್ನೂ ಮಾಡಲಿಲ್ಲ!
ಮೃತ್ಯು ಭಾಗ್ಯ
ಐದು ವರುಷಗಳ್ಳಲ್ಲಿ ಕರ್ನಾಟಕದಲ್ಲಿ ಎಷ್ಟೋ ಮಂದಿ ಬಿಜೆಪಿ ಬೆಂಬಲಿಗರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಅವರ ಮಾಡಿದ ಏಕೈಕ ತಪ್ಪು — ವಿರೋಧ ಪಕ್ಷವಾದ ಬಿಜೆಪಿಯನ್ನು ಸಮರ್ಥಿಸಿದ್ದು. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಈ ಎರಡು ಕಡೆಯಂತೂ ಈ ಹಾವಳಿ ಅತಿ ಹೆಚ್ಚಾಗಿತ್ತು. ಬೆಂಗಳೂರಿನ ಸಂತೋಷ್, ಮಂಗಳೂರಿನ ದೀಪಕ್ ರಾವ್, ಪ್ರಶಾಂತ್ ಪೂಜಾರಿ, ಮೈಸೂರಿನ ರವಿ, ಬೀದರಿನ ಸುನಿಲ್ — ದಾರುಣವಾಗಿ ಮರಣಕ್ಕೊಳಗಾದವರ ಪಟ್ಟಿ ಬೆಳೆಯುತ್ತಲೇ ಹೋಗಿದೆ. ಈ ಹತ್ಯೆಗಳಿಂದಾಗಿ ಕರ್ನಾಟಕದ ಸುಮಾರು ಪ್ರದೇಶಗಳಲ್ಲಿ ಭಯ-ಭೀತಿ ಮತ್ತು ಕೋಮುವಾದದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಿರುಕುಳ ಭಾಗ್ಯ
ಯಾವುದೇ ರಾಜ್ಯ ಸರಕಾರ ಚೆನ್ನಾಗಿ ಸಾಧನೆ ಮಾಡಬೇಕಾದರೆ ಮಂತ್ರಿಗಳಷ್ಟೇ ಅಲ್ಲದೇ ಸರಕಾರದ ಅಧಿಕಾರಿಗಳು ಕೂಡ ರೈಸಬೇಕು. ಐಎಎಸ್, ಐಪಿಎಸ್, ಐಎಫ್ಎಸ್ ಇನ್ನಿತರ ವರ್ಗಕ್ಕೆ ಸೇರಿದ ಅಧಿಕಾರಿಗಳ ಸಹಾಯದಿಂದ ಮಾತ್ರ ಉತ್ತಮ ಆಡಳಿತ ಕೊಡಲು ಸಾಧ್ಯ. ಆದ್ದರಿಂದಲೇ ಆ ಅಧಿಕಾರಿಗಳು ನಿಷ್ಟಾವಂತರಾಗಿರಬೇಕು ಹಾಗೆಯೇ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೂಡ ಇರಬೇಕು. ಆದರೆ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದದ್ದೇ ಬೇರೆ. ರೋಹಿಣಿ ಸಿಂಧೂರಿ ಎಂಬ ಜಿಲ್ಲಾಡಳಿತ ಅಧಿಕಾರಿಯವರು ಮಂತ್ರಿಗಳು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣದಿಂದ ಸತತ ವರ್ಗಾವಣೆಯ ಕಿರುಕುಳಕ್ಕೆ ಒಳಗಾದಿದ್ದಾರೆ. ಡಿಐಜಿ ರೂಪ ಅವರು ಬೆಂಗಳೂರು ಜೈಲಿನಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬ ವರದಿ ನೀಡಿದ್ದು ಅದೇ ಅವರ ಪಾಲಿಗೆ ಮುಳುವಾಗಿದೆ. ಇಂತಹ ವಿಷಯವನ್ನು ಬಹಿರಂಗ ಮಾಡಿದ್ದಕ್ಕೆ ಸನ್ಮಾನ ಮಾಡುವ ಬದಲು ಅವರಿಗೆ ಕೊಟ್ಟದ್ದು ವರ್ಗಾವಣೆಯ ಶಿಕ್ಷೆ. ಅಧಿಕಾರಿ ಡಿ. ಕೆ. ರವಿ ಅವರಂತೂ ನಿಗೂಡ ರೀತಿಯಲ್ಲಿ ಸಾವನ್ನಪ್ಪಿದರು. ಡಿಎಸ್ಪಿ ಗಣಪತಿಯವರದೂ ಇದೇ ಗತಿ. ‘ನನಗೆ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ತೊಂದರೆ ನೀಡುತ್ತಿದ್ದರು’ ಎಂದು ಸಾಯುವ ಕೆಲವೇ ಹೊತ್ತು ಹಿಂದೆ ಹೇಳಿಕೆ ನೀಡಿದ್ದರೂ ಯಾರೊಬ್ಬರ ಮೇಲೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ತಮ್ಮ ನಿಷ್ಠೆ ಮತ್ತು ನಿಯತ್ತಿಗೆ ಅನೇಕ ಅಧಿಕಾರಿಗಳು ದೊಡ್ಡ ಬೆಲೆಯನ್ನೇ ತೆತ್ತಿದ್ದಾರೆ.
ಉಪವಾಸ ಭಾಗ್ಯ
ಕ್ಷೀರ ಭಾಗ್ಯ ಅನ್ನ ಭಾಗ್ಯ ಎಂದೆಲ್ಲಾ ಟಾಮ್ ಟಾಮ್ ಹೊಡೆಯುತ್ತಿದ್ದ ಈ ಸರಕಾರ ಕಳೆದ ವರ್ಷ ಹಟಾತ್ತಾಗಿ ರಾತ್ರೋರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಕಲ್ಲಡ್ಕದ ಶಾಲೆಯೊಂದಕ್ಕೆ ಕೊಲ್ಲೂರು ದೇವಸ್ಥಾನದಿಂದ ಹೋಗುತ್ತಿದ್ದ ಊಟವನ್ನು ನಿಲ್ಲಿಸಿಬಿಟ್ಟಿತು. ಕಾರಣ? ಆ ಶಾಲೆಯನ್ನು ನಡೆಸುತ್ತಿದ್ದವರು ಬಿಜೆಪಿ-ಆರ್.ಎಸ್.ಎಸ್ ಸಂಬಂಧವಿರುವ ಪ್ರಭಾಕರ ಭಟ್ ಎಂಬವರು. ರಾಜಕೀಯ ವಿರೋಧವೇನೇ ಇರಲಿ ಮಕ್ಕಳ ಊಟಕ್ಕೆ ತೊಂದರೆ ಮಾಡಬಾರದು ಎಂಬ ಕನಿಷ್ಠ ಮನುಷ್ಯತ್ವವನ್ನೂ ತೋರದೆ ಬಡ ಮಕ್ಕಳ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿತು ಈ ಸರಕಾರ.
ನಿರ್ಲಕ್ಷ್ಯ ಭಾಗ್ಯ
ಕರ್ನಾಟಕಕ್ಕೆ ಬರುವ ಆದಾಯದಲ್ಲಿ ಅತಿ ಹೆಚ್ಚು ಕೊಡುಗೆ ಇರುವುದು ಬೆಂಗಳೂರು ನಗರದ್ದು. ಭಾರತದ ಸಿಲಿಕಾನ್ ಸಿಟಿ ಇದು. ಸಾವಿರಾರು ಕಂಪನಿಗಳು ಪ್ರತಿ ವರ್ಷ ಇಲ್ಲಿ ಸ್ಥಾಪನೆಯಾಗುತ್ತವೆ. ಲಕ್ಷಾಂತರ ಜನರು ಪ್ರತಿ ವರ್ಷ ಇಲ್ಲಿಗೆ ವಲಸೆ ಬರುತ್ತಾರೆ. ಇಂತಹ ಅತಿಮುಖ್ಯ ನಗರವನ್ನು ಸಂಪೂರ್ಣವಾಗಿ ನಿರ್ಲಕ್ಷೆ ಮಾಡಿದ ಕೀರ್ತಿ ಈ ಸರಕಾರಕ್ಕೆ ಸಲ್ಲುತ್ತದೆ. ಒಂದೆಡೆ ಪ್ರತಿ ರಸ್ತೆಯಲ್ಲಿ 10–20 ಹೊಂಡಗಳ ಭಾಗ್ಯ. ಮುಖ್ಯ ರಸ್ತೆಗಳಿಗೆ ಬಂದರೆ ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುವ ಭಾಗ್ಯ. ಕೆಲವರಿಗೆ ರಸ್ತೆಗಳಲ್ಲಿ ಧೂಳು ಸೇವಿಸುವ ಭಾಗ್ಯವಾದರೆ ಇನ್ಕೆಲವರಿಗೆ ಚರಂಡಿ ಮೋರಿಗಳ ವಾಸನೆ ಕುಡಿಯುವ ಭಾಗ್ಯ. ಐಟಿ ಕಂಪನಿ ಉದ್ಯೋಗಿಗಳಿಗೆ ಸಿಲ್ಕ್ ಬೋರ್ಡ್ನಲ್ಲೇ ತಿಂಡಿ, ಊಟ ಎಲ್ಲಾ ಮುಗಿಸುವ ಭಾಗ್ಯ. ರಿಂಗ್ ರೋಡ್ ನಲ್ಲಿ ಒಂದು ಕಡೆ pedestrian crossing ಹಾಕುವುದಕ್ಕೆ ಈ ಸರಕಾರ 3.5 ವರ್ಷ ತೆಗೆದುಕೊಂಡಿತು! ಇವೆಲ್ಲವನ್ನೂ ಮೀರಿಸುವ ಭಾಗ್ಯವೊಂದು ಬೆಂಗಳೂರಿನ ಜನರಿಗೆ ಈ ಸರಕಾರದಿಂದ ದೊರಕಿದೆ — ಅದೇ ಕೆರೆಗಳಲ್ಲಿ ಬೆಂಕಿಯನ್ನು ನೋಡುವ ವಿಸ್ಮಯದ ಭಾಗ್ಯ!
ಬೆದರಿಕೆ ಭಾಗ್ಯ
ಮಹೇಶ್ ಹೆಗ್ಡೆ ಎಂಬ ಹಿಂದು, ಹಾಗೂ ಬಿಜೆಪಿ ಬೆಂಬಲಿಗರೊಬ್ಬರು, ಬೆಂಗಳೂರಿನಲ್ಲಿ ನಡೆದ ಒಂದು ಹಲ್ಲೆಯ ಪ್ರಕರಣ ಧರ್ಮ ವೈಷಮ್ಯದಿಂದ ಆಗಿದೆ ಎಂದು ಸಾಮಾಜಿಕ ಅಂತರ್ಜಾಲದಲ್ಲಿ ಬರೆದರು. ಅದನ್ನೇ ಕಾರಣ ಮಾಡಿಕೊಂಡು ಅವರು ಹಿಂದೆ ಸರಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಬರೆದಿದ್ದ ಲೇಖನಗಳಿಂದ ಆಗಿದ್ದ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳಲು ಅವರನ್ನು ಎರಡು ಮೂರು ಕೇಸುಗಳ್ಳಲ್ಲಿ ಸಿಲುಕಿಸಿ ಒಟ್ಟು 17–18 ದಿನ ಜೈಲಿನಲ್ಲಿ ಇರುವಂತೆ ಮಾಡಿತು ಈ ಸರಕಾರ. ಕೊನೆಗೂ ಹೇಗೋ ಬಿಜೆಪಿ ಪರ ವಕೀಲರ ಕಠಿಣ ಪರಿಶ್ರಮದಿಂದ ಮಹೇಶ್ ಅವರು ಜೈಲಿನಿಂದ ಆಚೆ ಬಂದರು. ಆದರೆ ಸರಕಾರದ ಈ ರೀತಿಯ ದಬ್ಬಾಳಿಕೆಯ ಕ್ರಮದಿಂದ ಕರ್ನಾಟಕದ ಯುವಕರಲ್ಲಿ ಒಂದು ರೀತಿಯ ಭಯ ಮೂಡಿದೆ. ನಾವು free speech ಸಮರ್ಥಿಸುವವರು ಎಂದು ಹೇಳಿಕೊಂಡು ಓಡಾಡುವ ಸರಕಾರ ಜನ ಬಾಯಿ ಬಿಡುವುದಕ್ಕೆ ಹೆದರುವಂತಹ ವಾತಾವರಣ ಸೃಷ್ಟಿ ಮಾಡಿಟ್ಟಿದೆ!
ಕೊನೆಯುಂಟೆ ಈ ಭಾಗ್ಯಗಳಿಗೆ?
ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ನೊಂದು ಬೇಸತ್ತಿರುವ ಕರ್ನಾಟಕದ ಜನತೆ “ನಮಗೆಂದು ಈ ದುರ್ಭಾಗ್ಯಗಳಿಂದ ಮುಕ್ತಿ?” ಎಂದು ಕೇಳುತ್ತಿದ್ದಾರೆ. ಅವರಿಗೆ ಮೇ 15ರಂದು ಉತ್ತರ ಸಿಗುತ್ತದೆಯೇ ಎಂದು ಕಾದು ನೋಡಬೇಕು.
ಜೈ ಕರ್ನಾಟಕ ಮಾತೆ! ಭಾರತ್ ಮಾತಾಕಿ ಜೈ!
Leave a Reply